
ಹೊಯ್ಸಳ ವಿಜಯ ಅರಸೀಕೆರೆ
ಅರಸೀಕೆರೆ:ರಾಜ್ಯಾದ್ಯಂತ ಕರ್ತವ್ಯಕ್ಕೆ ಪೌರ ನೌಕರರು ಗೈರಾಗಿ ಕಸ ಸಂಗ್ರಹ, ವಿಲೇವಾರಿ, ಸ್ವಚ್ಛತೆ, ನೀರು ಪೂರೈಕೆ, ಒಳಚರಂಡಿ ನಿರ್ವಹಣೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದೇವೆ ಎಂದು ನಗರಸಭೆ ಅಧೀಕ್ಷಕ ಹಾಗೂ ಪೌರ ನೌಕರರ ಅಧ್ಯಕ್ಷ ಜಮೀಲ್ ಪಾಷ ಹೇಳಿದರು. ಅರಸೀಕೆರೆ ನಗರಸಭೆ ಆವರಣದಲ್ಲಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಸೂಚನೆ ಮೇರೆಗೆ ಅರಸೀಕೆರೆ ನಗರ ಸಭೆ ಪೌರ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿ, ಜ್ಯೋತಿ ಸಂಜೀವಿನಿ, ಕೆ ಜಿ ಐ ಡಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು, ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು ಸೇರಿದಂತೆ ವಿವಿಧ ವೃಂದದ ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು, ದಿನಗೂಲಿ, ಕ್ಷೇಮಾಭಿವೃದ್ಧಿ, ಸಮಾನ ಕೆಲಸಕ್ಕೆ ಸಮಾನ ವೇತನ, ನೌಕರರನ್ನು ಕಾಯ ಮಾಡುವುದು, ಎಲ್ಲಾ ನೌಕರರಿಗೆ ಎಸ್ ಎಫ್ ಸಿ ಮುಕ್ತ ನಿಧಿಯಿಂದ ವೇತನ ನೀಡಬೇಕೆಂದು ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದೇವೆ ಎಂದು ಹೇಳಿದರು.
ಆರೋಗ್ಯ ನಿರೀಕ್ಷಕ ಲಿಂಗರಾಜು, ಮ್ಯಾನೇಜರ್ ಕಲಾವತಿ ಮುಷ್ಕರ ಕುರಿತು ಮಾತನಾಡಿದರು.
ಕಚೇರಿ ಸಿಬ್ಬಂದಿಗಳು, ಪೌರ ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದರು.