March 2, 2026
IMG-20260224-WA0027.jpg



ಕಾರವಾರ: ರಾಜ್ಯದ ಸ್ಥಳೀಯ ಸಂಸ್ಥೆಗಳ ಆಡಳಿತ ವ್ಯವಸ್ಥೆಗೆ ಮರುಜೀವ ನೀಡಲು ಸರ್ಕಾರ ಸಜ್ಜಾಗಿದ್ದು, ಜೂನ್ ತಿಂಗಳೊಳಗೆ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮಂಜುಗುಣಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಗಂಗಾವಳಿ ಸೇತುವೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಒಂದೇ ಹಂತದಲ್ಲಿ ಮೆಗಾ ಚುನಾವಣೆ?
ರಾಜ್ಯದ ಆಡಳಿತ ವಿಕೇಂದ್ರೀಕರಣಕ್ಕೆ ಒತ್ತು ನೀಡುವ ಉದ್ದೇಶದಿಂದ ಈ ಬಾರಿ ಬೃಹತ್ ಮಟ್ಟದ ಚುನಾವಣಾ ತಯಾರಿ ನಡೆಸಲಾಗುತ್ತಿದೆ ಎಂದು ಸಿಎಂ ತಿಳಿಸಿದರು.

* ವ್ಯಾಪ್ತಿ: ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಮಾತ್ರವಲ್ಲದೆ ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆಗಳ ಚುನಾವಣೆಗಳನ್ನು ಸಹ ನಡೆಸಲು ಯೋಜನೆ ರೂಪಿಸಲಾಗಿದೆ.

* ಏಕಕಾಲಕ್ಕೆ ತಯಾರಿ: ಸಾಧ್ಯವಾದಷ್ಟು ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಒಂದೇ ಹಂತದಲ್ಲಿ ನಡೆಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಅವರು ಸ್ಪಷ್ಟಪಡಿಸಿದರು.

ಚುನಾವಣೆ ವಿಳಂಬವಾಗುತ್ತಿರುವ ಬಗ್ಗೆ ಮಾತನಾಡಿದ ಅವರು, “ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ನಿಟ್ಟಿನಲ್ಲಿ ಈಗಾಗಲೇ ವಿವಿಧ ತಾಂತ್ರಿಕ ಪ್ರಕ್ರಿಯೆಗಳು ನಡೆಯುತ್ತಿವೆ. ಪ್ರಮುಖವಾಗಿ ವಾರ್ಡ್‌ಗಳ ಮರು ವಿಂಗಡಣೆ ಕಾರ್ಯ ಬಾಕಿ ಇದ್ದು, ಅದನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ,” ಎಂದರು.
ಚುನಾವಣೆ ಬಳಿಕವಷ್ಟೇ ಮೇಲ್ದರ್ಜೆಗೆ
ಹಲವು ಗ್ರಾಮ ಪಂಚಾಯತ್ ಅಥವಾ ಪಟ್ಟಣ ಪಂಚಾಯತ್‌ಗಳನ್ನು ಮೇಲ್ದರ್ಜೆಗೆ ಏರಿಸುವ  ಬೇಡಿಕೆಗಳ ಕುರಿತು ಉತ್ತರಿಸಿದ ಸಿಎಂ, “ಯಾವ್ಯಾವ ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂಬ ವಿಷಯವನ್ನು ಈಗ ಕೈಗೆತ್ತಿಕೊಳ್ಳುವುದಿಲ್ಲ. ಮೊದಲು ಚುನಾವಣೆ ಪ್ರಕ್ರಿಯೆ ಮುಗಿಯಲಿ, ಆ ನಂತರವಷ್ಟೇ ಈ ಬಗ್ಗೆ ಕ್ರಮ ವಹಿಸಲಾಗುವುದು,” ಎಂದು ಸ್ಪಷ್ಟನೆ ನೀಡಿದರು.

Leave a Reply

Your email address will not be published. Required fields are marked *

error: Content is protected !!
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 91640 32789, 951910209 ಉಮೇಶ್ ಬಾಣಾವರ ಸಂಪಾದಕರು