
ವಿದ್ಯಾರ್ಥಿಗಳ ಏಳ್ಗೆಯ ಹಿಂದೆ ಗುರುವಿನ ಪರಿಶ್ರಮವಿದೆ: ಎ.ಸಿ. ಕಾಲಿಮಿರ್ಚಿ
ವಿಶೇಷ ವರದಿ: ಕೆ.ಎಂ.ಶರಣಯ್ಯಸ್ವಾಮಿ
ಕೊಪ್ಪಳ, ಮೇ.26: ಗುರುವಂದನೆ ಎಂದರೆ ತೋರಿಕೆಗಾಗಿ ಕೆಲ ಶಿಕ್ಷಕರನ್ನು ವೇದಿಕೆಯಲ್ಲಿ ಕರೆದು ಸನ್ಮಾನಿಸಿ ಗೌರವಿಸುವ ಆಡಂಬರದ ಕಾರ್ಯಕ್ರಮಗಳು ಆಗಬಾರದು. ಗುರುವಂದನಾ ಕಾರ್ಯಕ್ರಮಗಳು ಪ್ರತಿಯೊಬ್ಬರ ಜೀವನ ಬದಲಿಸುವ ಮಹತ್ವದ ವೇದಿಕೆಗಳು ಆಗಬೇಕು ಎಂದು ಬಾಪೂಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎ.ಸಿ. ಕಾಲಿಮಿರ್ಚಿ ತಿಳಿಸಿದರು.
ನಗರದ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬಾಪೂಜಿ ಡಿಇಡಿ ಕಾಲೇಜು ಮಂಗಳೂರಿನ 2006-07ನೇ ಸಾಲಿನ ಪ್ರಶಿಕ್ಷಣಾರ್ಥಿಗಳಿಂದ ಸೋಮವಾರದಂದು ಆಯೋಜಿಸಲಾಗಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಥಮಿಕ ಶಿಕ್ಷಣ ಹಂತದಿಂದ ಪದವಿ ಹಂತದವರೆಗೆ ಜ್ಞಾನಾರ್ಜನೆಯನ್ನು ನೀಡುವ ಗುರು ಎಂದಿಗೂ ನಮ್ಮ ಜೀವನದ ಮಾರ್ಗದರ್ಶಿಯಾಗಿರುತ್ತಾರೆ. ಇಂದು ನೀವೆಲ್ಲರೂ ಉನ್ನತ ಹುದ್ದೆಯಲ್ಲಿ ಇದ್ದು ನಿಮ್ಮ ನಿಮ್ಮ ಜೀವನವನ್ನು ರೂಪಿಸಿಕೊಂಡು ಏನಾದರು ಸಾಧನೆ ಮಾಡಿದ್ದರೆ ಅದಕ್ಕೆ ನಮಗೆ ವಿದ್ಯೆ ಕಲಿಸಿದ ಗುರುಗಳ ಪರಿಶ್ರಮವೇ ಕಾರಣ. ಇಂದು ನಾವೆಲ್ಲ ಹಲವು ವರ್ಷಗಳ ನಂತರ ಒಂದೆಡೆ ಸೇರಿ ಕಲಿಸಿದ ಗುರುವಿಗೆ ಗುರುವಂದನೆ ಮೂಲಕ ಗೌರವಿಸುತ್ತಿರುವುದು ಈ ನಾಡಿನ ಸಂಸ್ಕøತಿ ಹಾಗೂ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಉಪನ್ಯಾಸಕ ಎಸ್.ವಿ. ಹೂಗಾರ ಮಾತನಾಡಿ, ಹಿಂದಿನ ಶಿಕ್ಷಣ ಪದ್ಧತಿಗೂ ಇಂದಿನ ಶಿಕ್ಷಣ ಪದ್ಧತಿಗೂ ಅಜಗಜಾಂತರ ವ್ಯತ್ಯಾಸವಿದೆ. ನಮ್ಮ ಕಾಲದಲ್ಲಿ ಗುರುಗಳ ಬಗ್ಗೆ ಭಯಕ್ಕಿಂತ ಮಿಗಿಲಾಗಿ ಗೌರವ ಇರುತ್ತಿತ್ತು ಮತ್ತು ಅಕ್ಷರ ಕಲಿಸುವ ಗುರು ದೈವ ಸಮಾನ ಎಂಬಂತೆ ನಮ್ಮ ಹಿರಿಯರೂ ಕೂಡ ಗೌರವಿಸುತ್ತಿದ್ದರು. ಆದರೆ, ಇಂದಿನ ದಿನಮಾನಗಳಲ್ಲಿ ಬದಲಾದ ಕಾನೂನು ವ್ಯವಸ್ಥೆ ಹಾಗೂ ಅತಿಯಾದ ಸ್ವೇಚ್ಛೆಯಿಂದಾಗಿ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತ. ಶಿಕ್ಷಕರ ಕೈಹಿಂದ ಒದೆ ತಿನ್ನದ ಮಕ್ಕಳು ಮುಂದಿನ ದಿನಗಳಲ್ಲಿ ಪೊಲೀಸರಿಂದ ಒದೆ ತಿನ್ನುವಂತಹ ಪರಿಸ್ಥಿತಿಗಳು ನಿರ್ಮಾಣವಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಅವರು, ತಂತ್ರಜ್ಞಾನದ ಅತಿಯಾದ ದುರ್ಬಳಕೆಯಿಂದಾಗಿ ಮಕ್ಕಳು ಕಂಪ್ಯೂಟರ್ ಮತ್ತು ಮೊಬೈಲ್‍ಗಳಿಗೆ ದಾಸರಾಗಿದ್ದಾರೆ. ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿದ್ದು, ಕ್ರೀಡಾಚಟುವಟಿಕೆಗಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಆದ್ಯತೆ ನೀಡುತ್ತಿಲ್ಲ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸುವುದೇ ಸಾಧನೆ ಎಂಬ ಗುಂಗಿನಲ್ಲಿದ್ದಾರೆ. ಇದನ್ನು ಪಾಲಕರು ಮನವರಿಕೆ ಮಾಡಿಕೊಳ್ಳಬೇಕು. ಮಕ್ಕಳನ್ನು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಬೆಳೆಸುವ ನಿಟ್ಟಿನಲ್ಲಿ ಗಮನಹರಿಸಬೇಕು. ಸಂಗೀತ, ಸಾಹಿತ್ಯ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಮಗೆ ಜ್ಞಾನಾರ್ಜನೆ ನೀಡಿದ ಗುರುಸಮೂಹವನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ನಂತರ ಹಳೆಯ ಪ್ರಶಿಕ್ಷಣಾರ್ಥಿಗಳು ತಮ್ಮ ಶೈಕ್ಷಣಿಕ ದಿನಗಳನ್ನು ಮೆಲುಕು ಹಾಕುತ್ತಾ ಭಾವುಕರಾದರು. ಕೆಲವರು ಪ್ರಸ್ತುತ ತಾವು ನಿರ್ವಹಿಸುತ್ತಿರುವ ಹುದ್ದೆ ಹಾಗೂ ವ್ಯಾಪಾರ ವಹಿವಾಟುಗಳ ಹಾಗೂ ಪ್ರಸಕ್ತ ಜೀವನದ ಕಷ್ಟ ಸುಖಗಳನ್ನು ಪರಸ್ಪರ ಹಂಚಿಕೊಂಡರು.
ಈ ಸಂದರ್ಭದಲ್ಲಿ ಉಪನ್ಯಾಸಕ ಎಸ್.ಜಿ ಗೌಡರ, ಎಸ್.ಎಸ್ ಸಸಿಮಠ, ಕೃಷ್ಣ ವೇದಪಾಠಕ, ಎಸ್.ಬಿ ಹಳ್ಳಿಕೇರಿ, ಬಿ.ಜಿ ಗಾಣಿಗೇರ, ಜಹೀರ್ ಪಾಷ ಕಲಾಲಬಂಡಿ, ಆರ್.ಎಂ ಮುದ್ದಿ, ಸಿ.ಎ ಪಾಟೀಲ್, ಸಹಾಯಕ ಮಂಗಳಪ್ಪ,. ಪ್ರಶಿಕ್ಷಣಾರ್ಥಿಗಳಾದ ಮಂಜುನಾಥ ತರಬಾಳ, ಅಯ್ಯನಗೌಡ, ವಿನಾಯ ಕಡ್ಡಿ, ವಿನಾಯಕುಮಾರ ಕುಂಬಾರ,ಪ್ರವೀಣ್ ಮುತ್ತಾಳ,ಶಂಕ್ರಮ್ಮ ದೇಸಾಯಿ, ಶಂಕರ್ ಪಿ,ಬದ್ರಿನಾಥ, ಪ್ರಕಾಶ ಕುಲಕರ್ಣಿ, ಗವಿಸಿದ್ದಪ್ಪ ಮಸಾಲಿ, ರಮೇಶ, ಮಂಜುನಾಥ, ಶರಣಗೌಡ, ಪ್ರಕಾಶ ಕಾರಟಗಿ, ಕನಕಚಲ, ವಿಷ್ಣುವರ್ಧನ್, ಪ್ರಸನ್ನಕುಮಾರ, ಅಕ್ಕಮಹಾದೇವಿ ಯಾರದೊಡ್ಡಿ, ವಿಜಯಲಕ್ಷ್ಮಿ, ಸರಸ್ವತಿ, ಸುನಂದಾ ಸೇರಿದಂತೆ ಇತರರಿದ್ದರು.
ಕೋಟ್-01
ಡಿಇಡಿ ತರಬೇತಿ ಸಮಯದಲ್ಲಿ ನಾವೆಲ್ಲ ಕಳೆದ ದಿನಗಳು ಮರೆಯಲಾರದ ಸಂಭ್ರಮದ ದಿನಗಳು. ಬಹಳ ದಿನಗಳ ನಂತರ ನಾವೆಲ್ಲ ಒಂದೆಡೆ ಸೇರಿ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಿದ್ದು ಸಂತಸ ತಂದಿದೆ. ಪ್ರಸ್ತುತ ಜೀವನದಲ್ಲಿ ಏನೇ ಜಂಜಾಟಗಳಿದ್ದರೂ ಕೂಡ ಈ ಕಾರ್ಯಕ್ರಮ “ಬದುಕಿನ ಜಂಜಾಟಗಳು ಇದ್ದದ್ದೆ. ಬಾ ಗುರು ಸಂಭ್ರಮಿಸೋಣ” ಎಂಬ ಸಂದೇಶ ನೀಡಿದಂತಾಗಿದೆ.
– ಪಿ.ಶಂಕರ್, ಶಿಕ್ಷಕರು.
ಕೋಟ್-02
ಬದುಕಿನ ಜಂಜಾಟದಲ್ಲಿ ಕಳೆದುಹೋಗಿದ್ದ ನಮಗೆ ಈ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಹೊಸ ಚೈತನ್ಯವನ್ನು ತುಂಬಿದೆ. ಬದುಕಿನ ಸಂಕಷ್ಟಗಳನ್ನು ಮರೆತು ಮತ್ತೊಮ್ಮೆ ಹಳೆಯ ದಿನಗಳಿಗೆ ಹೋಗಿಬಂದಂತಹ ಅನುಭವವಾಗಿದೆ. ಗುರುವಂದನೆ ಕಾರ್ಯಕ್ರಮಗಳ ಮೂಲಕ ಕಲಿಸಿದ ಗುರುವಿನ ಋಣ ತೀರಿಸಿದ ಸಾರ್ಥಕ ಮನೋಭಾವನೆ ಉಂಟಾಗಿದೆ.
– ಮಂಜುನಾಥ ತುರಬಾಳ, ಶಿಕ್ಷಕರು
ಕೋಟ್-03
ಮಹಿಳೆ ಅಬಲೆಯಲ್ಲ ಸಬಲೆ ಎಂಬುವುದನ್ನು ಮೊದಲು ಮನವರಿಕೆ ಮಾಡಿಕೊಟ್ಟದ್ದು ನನಗೆ ವಿದ್ಯೆ ಕಲಿಸಿದ ಗುರುಗಳು. ಅವರ ಆಶೀರ್ವಾದದಿಂದ ಇಂದು ಸರಕಾರಿ ನೌಕರಳಾಗಿ ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದೇನೆ. ನೌಕರಿಯ ಜೊತೆಗೆ ಕುಟುಂಬ ನಿರ್ವಹಣೆಯ ತಾಳ್ಮೆಯನ್ನು ಕಲಿಸಿದ್ದು ಗುರುಗಳ ಹಿತವಚನಗಳು. ಇಂತಹ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮಗಳು ನಮ್ಮೆಲ್ಲರ ಉತ್ಸಾಹವನ್ನು ಇಮ್ಮಡಿಗೊಳಿಸುತ್ತವೆ.
– ಅಕ್ಕಮಹಾದೇವಿ, ಗ್ರಾಮ ಅಭಿವೃದ್ಧಿ ಅಧಿಕಾರಿ.