
ಮೇ.೨೭: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಮುಂಗಾರು ಬಿತ್ತನೆಗೆ ಅನುಕೂಲವಾಗುವಂತೆ ರೈತರಿಗೆ ಬೀಜ ವಿತರಣಾ ಸಮಾರಂಭ ಜರುಗಿತು. ನರೇಗಲ್ಲ ಹೋಬಳಿಯ ರೈತರು ಪಾಲ್ಗೊಂಡು ಬಿತ್ತನೆ ಬೀಜ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಶಿವನಗೌಡ ಪಾಟೀಲ ಈ ಸಾರೆ ಮುಂಗಾರು ಮಳೆ ಬೀಳುವದಕ್ಕಿಂತಲೂ ಮೊದಲು ಮುಂಗಾರು ಪೂರ್ವ ಮಳೆ ಚೆನ್ನಾಗಿ ಬಿದ್ದಿದೆ. ಇದು ನಮಗೆಲ್ಲರಿಗೂ ಹೆಸರು ಬಿತ್ತನೆಗೆ ಅನುಕೂಲವಾಗಿದೆ. ಸರಕಾರವೂ ಸಹ ರೈತರಿಗೆ ಬಿತ್ತನೆ ಬೀಜ ಬೇಗನೆ ದೊರಕಬೇಕೆಂದು ಈಗಾಗಲೆ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಸಾಕಷ್ಟು ಬಿತ್ತನೆ ಬೀಜ ಸಂಗ್ರಹಿಸಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡು ಉತ್ತಮ ಬೆಳೆ ತೆಗೆಯೋಣ ಎಂದರು.
ರೋಣ ಸಹಾಯಕ ಕೃಷಿ ನಿರ್ದೇಶಕ ರವೀಂದ್ರಗೌಡ ಪಾಟೀಲ ಮಾತನಾಡಿ ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ದಾಸ್ತಾನು ಸಾಕಷ್ಟು ಇದೆ. ರೈತರು ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಬಿತ್ತನೆ ಕಾರ್ಯ ಪ್ರಾರಂಭಿಸಬಹುದೆಂದರು.
ಕೃಷಿ ಅಧಿಕಾರಿ ಬಸವರಾಜ ಗದಗಿನ ಮಾತನಾಡಿ ನಮ್ಮಲ್ಲಿ ೬೫ ಕ್ವಿಂಟಾಲ್ ಹೆಸರು, ಗೋವಿನ ಜೋಳ, ಸೂರ್ಯಕಾಂತಿ, ಸೆಜ್ಜೆ ಬಿತ್ತನೆ ಬೀಜಗಳು ಲಭ್ಯವಿವೆ. ಈ ಸಾರೆ ವಾಡಿಕೆಗಿಂತ ಶೇ. ೫ರಷ್ಟು ಹೆಚ್ಚಿನ ಮಳೆ ಬೀಳುವ ಸಂಭವ ಇರುವದರಿಂದ ಬಿತ್ತನೆಗೆ ಇದು ಸಕಾಲವಾಗಿದ್ದು, ರೈತರು ಹೊಲದ ಹದವನ್ನು ನೋಡಿಕೊಂಡು ಬಿತ್ತನೆ ಮಾಡಬಹುದೆಂದರು. ಹೆಸರು ಬೀಜ ಪಡೆಯುವ ಸಾಮಾನ್ಯ ರೈತರು ೫೭೫ರೂ.ಗಳನ್ನು ಮತ್ತು ಎಸ್‌ಸಿಎಸ್‌ಟಿ ರೈತರು ೫೧೨.೫ರೂ.ಗಳನ್ನು ನೀಡಿ ಬಿತ್ತನೆ ಬೀಜಗಳನ್ನು ಪಡೆಯಬಹುದೆಂದರು. ನಂತರ ಅವರು ಬೀಜೋಪಚಾರ, ಕ್ರಿಮಿನಾಶಕ ಸಿಂಪಡಣೆ ಬಗ್ಗೆ ರೈತರಿಗೆ ವಿಶೇಷ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಶರಣಯ್ಯ ಮಾಸ್ತಗಟ್ಟಿ, ಶರಣಪ್ಪ ಬೆಟಗೇರಿ, ಕೃಷಿ ಅಧಿಕಾರಿ ಸಿ. ಕೆ. ಕಮ್ಮಾರ, ಕೃಷಿಕ ಸಮಾಜದ ಉಪಾಧ್ಯಕ್ಷ ಮುದುಕಪ್ಪ ಬೆಟಗೇರಿ, ಖಜಾಂಚಿ ಚನ್ನಬಸಪ್ಪ ಹಡಪದ, ಪ್ರಧಾನ ಕಾರ್ಯದರ್ಶಿ ಬಸಪ್ಪ ಹೊಗರಿ, ಚನ್ನಬಸಪ್ಪ ಕುಷ್ಟಗಿ, ಶಿವಕುಮಾರ ಮಾವಿನಕಾಯಿ, ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಯವರೆಲ್ಲರೂ ಉಪಸ್ಥಿತರಿದ್ದರು.
ಮೇ.೨೭-ಎನ್‌ಆರ್‌ಜಿಎಲ್೧-ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಮುಂಗಾರು ಬಿತ್ತನೆಗೆ ಅನುಕೂಲವಾಗುವಂತೆ ರೈತರಿಗೆ ಬೀಜ ವಿತರಣೆ ಸಮಾರಂಭ ಜರುಗಿತು.