
ಅರಸೀಕೆರೆ: ಮನುಷ್ಯನ ಆರೋಗ್ಯಕ್ಕೆ ಶುದ್ಧ ಕುಡಿಯುವ ನೀರು ಅತ್ಯಗತ್ಯ. ಆದ್ದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಶುದ್ದ ಕುಡಿಯುವ ನೀರಿನ ಪೂರೈಕೆಗೆ ಪ್ರಥಮ ಆದ್ಯತೆ ನೀಡಿದೆ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲೆಯಲ್ಲಿ 49 ಶುದ್ದ ಕುಡಿಯುವ ನೀರು ಘಟಕಗಳನ್ನು ಸ್ಥಾಪಿಸಿದ್ದು, 40 ಘಟಕಗಳು ಅರಸೀಕೆರೆ ತಾಲೂಕಿನಲ್ಲಿಯೇ ಇವೆ ಎಂದು ಜಿಲ್ಲಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ನಿರ್ದೇಶಕ ಸುರೇಶ್ ಮೊಲಿ ಹೇಳಿದರು.
ಅವರು ನಗರದ ಹಾರನಹಳ್ಳಿ ರಾಮಸ್ವಾಮಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಶುದ್ಧ ಕುಡಿಯುವ ನೀರು ಘಟಕಗಳ ನಿರ್ವಹಣಾ ಪ್ರೇರಕರ ಪ್ರಗತಿ ಪರಿಶೀಲನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಶುದ್ಧ ಕುಡಿಯುವ ನೀರು ಘಟಕ ಪ್ರಾರಂಭಿಸಿದಾಗ ಮೊಟ್ಟ ಮೊದಲಿಗೆ ಕಡೂರಿನಲ್ಲಿ ಸ್ಥಾಪಿಸಲಾಯಿತು ಎಂದು ಹಿಂದಿನದನ್ನು ನೆನಪಿಸಿದರು. ರಾಜ್ಯದಲ್ಲಿ 530 ಘಟಕಗಳನ್ನು ಸ್ಥಾಪಿಸಲಾಗಿದ್ದು, ಇನ್ನೂ 150 ಘಟಕಗಳು ಪ್ರಾರಂಭವಾಗಲಿದೆ. ಶುದ್ಧ ನೀರು ಘಟಕದ ಸುತ್ತ ಪರಿಸರವನ್ನ ಕಾಪಾಡಿಕೊಳ್ಳುವಲ್ಲಿ ಘಟಕ ಪ್ರೇಯರಕರು ವಿಶೇಷ ಕಾಳಜಿ ವಹಿಸಬೇಕು, ನಿರ್ವಹಣೆಯಲ್ಲಿ ಶ್ರದ್ಧೆ ಇರಲಿ ನಿಗದಿತ ಸಮಯದಲ್ಲಿ ನೀವು ಕರ್ತವ್ಯ ನಿರ್ವಹಿಸಬೇಕು. ಕೆಲಸಕ್ಕೆ ಹೋಗುವವರು ಬೆಳಗ್ಗೆ ಕುಡಿಯುವ ನೀರನ್ನು ತೆಗೆದುಕೊಂಡು ಹೋಗಲು ಬರುತ್ತಾರೆ ಆ ಸಮಯದಲ್ಲಿ ನೀವು ತೆರೆದಿರಬೇಕು, ಧರ್ಮಸ್ಥಳ ಕ್ಷೇತ್ರ ನಿರ್ವಹಣೆ ಮಾಡುತ್ತಿರುವ ಈ ಘಟಕಗಳು ನೈರ್ಮಲ್ಯದಿಂದ ಇರುವಂತೆ ಗಮನ ಕೊಡಿ ಪ್ರಾಮಾಣಿಕ ಸೇವೆಯಿಂದ ನೀವು ಬೆಳೆಯಲು ಸಾಧ್ಯವಾಗುತ್ತದೆ. 30 ವರ್ಷಗಳ ಹಿಂದೆ ನಾನು ಕೂಡ ಪ್ರೇರಕನಾಗಿದ್ದೆ ಇಂದು ನಿರ್ದೇಶಕನಾಗಿದ್ದೇನೆ ನಮ್ಮ ಕರ್ತವ್ಯ ನಿಷ್ಠೆ ನಮ್ಮನ್ನು ಬೆಳೆಸುತ್ತದೆ ಎಂದು ಕಿವಿಮಾತು ಹೇಳಿದರು.ಪ್ರಾರಂಭದಲ್ಲಿ ಮಹಿಳಾ ಸಂಘಗಳಿಗೆ ಕೇವಲ 20 ಸಾವಿರ ರೂಪಾಯಿ ಸಾಲ ನೀಡಲಾಗುತ್ತಿತ್ತು, ನಂತರ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಜನರು ಏನಾದರೂ ಬದುಕು ಕಟ್ಟಿಕೊಳ್ಳಲು ನೆರವಾಗುವಂತೆ ಮೂರು ಲಕ್ಷದಿಂದ ಐದು ಲಕ್ಷದ ವರೆಗೆ ಗುಂಪು ಸಾಲ ನೀಡಲಾಗುತ್ತಿದೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಈ ರೀತಿ ಪಡೆಯಲು ಸಾಧ್ಯವಾಗದು, ಸಾಲ ಪಡೆದವರು ಅದನ್ನ ಸದುಪಯೋಗ ಪಡಿಸಿಕೊಂಡು ಸಂತಸದಿಂದಲೇ ಸಾಲ ಮರುಪಾವತಿ ಮಾಡುತ್ತಿದ್ದಾರೆ, ಕೆಲವರು ದಾರಿ ತಪ್ಪಿಸುವ ಸಂದೇಶಗಳನ್ನು ಹರಿಬಿಟ್ಟ ಹಿನ್ನಲೆಯಲ್ಲಿ ಕೆಲವರು ಗೊಂದಲಕ್ಕೆ ಈಡಾಗಿದ್ದರು, ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ.ಈ ಸಾಲವನ್ನು ಬ್ಯಾಂಕ್ ಕೊಡುತ್ತಿದ್ದು ಶ್ರೀ ಕ್ಷೇತ್ರ ಬ್ಯಾಂಕಿಗೆ ನಮ್ಮ ಪರವಾಗಿ ಗ್ಯಾರಂಟಿ ನೀಡಿದೆ ಎಂಬುದನ್ನು ಅರಿತಿದ್ದಾರೆ ಎಂದರು.
ರೈತರಿಗೂ ಸಹಕಾರವಾಗಬಲ್ಲ ಕಡಿಮೆ ದರದಲ್ಲಿ ಯಂತ್ರೋಪಕರಣ ಬಾಡಿಗೆ ನೀಡುವ ಯೋಜನೆಯನ್ನು ತರಲಾಗಿತ್ತು, ಇದಕ್ಕೆ ಸರಕಾರವು ಕೈಜೋಡಿಸಿತ್ತು ನಂತರ ಸರಕಾರ ತಟಸ್ಥವಾದ ಕಾರಣ ಅದನ್ನು ಕೈ ಬಿಡಲಾಯಿತು. ಇಂದು ನಮ್ಮ ಸಂಸ್ಥೆಯ ವತಿಯಿಂದ 57 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ. 11,203 ಸೇವಾ ಕೇಂದ್ರಗಳು 29 ಉಚಿತ ಸೇವೆಯನ್ನು ನೀಡುತ್ತಿವೆ.ಕೆಲವಕ್ಕೆ ಮಾತ್ರ ನಿಗದಿತ ಶುಲ್ಕವಿದೆ , ಶ್ರೀ ಕ್ಷೇತ್ರದ ಹಲವು ಯೋಜನೆಗಳಿಂದ 53 ಲಕ್ಷ ಜನ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.
ಶುದ್ಧ ಗಂಗಾ ಕೇಂದ್ರ ಕಚೇರಿಯ ನಿರ್ದೇಶಕ ಧರ್ಮಸ್ಥಳದ ಪದ್ಮನಾಭ ಮಾತನಾಡಿ ಶ್ರೀ ಕ್ಷೇತ್ರವು ಜನರ ಸೌಖ್ಯಕ್ಕಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ, ಕೊರೊನಾ ಸಮಯದಲ್ಲಿ ಸೋಂಕಿತನ ಹತ್ತಿರ ಯಾರು ಸುಳಿಯಲು ಹೆದರುತ್ತಿದ್ದರು, ಶ್ರೀ ಕ್ಷೇತ್ರವು ಎರಡು ವಾಹನಗಳು ನೀಡಿ ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲು ಸಿಬ್ಬಂದಿಯನ್ನು ನೇಮಿಸಿತ್ತು, ಶ್ರೀಗಳ ಚಿಂತನೆಯಿಂದ ಸಾವಿರಾರು ಜನರ ಬದುಕನ್ನು ಬದಲಿಸಿದೆ, ಶುದ್ಧ ನೀರು ಘಟಕದ ಪ್ರೇರಕರು ಪುಣ್ಯದ ಕೆಲಸ ಮಾಡುತ್ತಿದ್ದೀರಿ, ಸೇವೆ ನೀಡಿ ಘಟಕದ ಪರಿಸರ ಚೆನ್ನಾಗಿರಲಿ, ದೂರು ಬಂದರೆ ತಕ್ಷಣ ಗಮನ ಕೊಡಿ ಜನರಿಗೆ ಸಮಸ್ಯೆ ಮಾಡಬೇಡಿ, 530 ಶುದ್ಧ ನೀರು ಘಟಕ ಸ್ಥಾಪಿಸಲಾಗಿದೆ, 903 ಕೆರೆಗಳ ಹೂಳನ್ನು ತೆಗೆಯಲಾಗಿದೆ, ಒಂದು ಸಾವಿರ ಕೆರೆಗಳನ್ನು ಹೂಳು ತೆಗೆವ ಗುರಿ ಇದೆ, ಇದರಿಂದ ಅಂತರ್ಜಲ ಹೆಚ್ಚುತ್ತದೆ, ಕೊಳವೆ ಬಾವಿಗಳಲ್ಲಿ ನೀರು ದೊರಕುತ್ತದೆ ರೈತರು ಇದರಿಂದ ಹರ್ಷಗೊಂಡಿದ್ದಾರೆ, ಆರ್ಥಿಕ ನೆರವನ್ನು ಕೊಡಲಾಗುತ್ತಿದೆ, ಬ್ಯಾಂಕಿನ ಪ್ರತಿನಿಧಿಯಾಗಿ ಸಂಸ್ಥೆ ಸಂಘಗಳಿಗೆ ಸಾಲ ಕೊಡಿಸುತ್ತಿದೆ, 1 ಲಕ್ಷಕ್ಕೆ ವರ್ಷಕ್ಕೆ ರೂ.7 ಸಾವಿರ ಬಡ್ಡಿ ಮಾತ್ರ, ಈ ಬಡ್ಡಿ ಬ್ಯಾಂಕಿಗೆ ನೇರವಾಗಿ ಹೋಗುತ್ತದೆ. ಶ್ರೀ ಕ್ಷೇತ್ರಕ್ಕೆ ಬರುವುದಿಲ್ಲ, ಸಾಲ ಪಡೆದವರು ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳುವ ಮೂಲಕ ನೆಮ್ಮದಿ ಕಾಣುತ್ತಿದ್ದಾರೆ ಎಂದರು.
ಜಿಲ್ಲಾ ಜನಜಾಗೃತಿ ಸದಸ್ಯ ಹೆಚ್. ಡಿ. ಸೀತಾರಾಂ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳವು ಹಲವು ಜನಪರ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದು, ಯಶಸ್ವಿಯಾಗಿ ಇದು ಫಲಾನುಭವಿಗಳಿಗೆ ತಲುಪುತ್ತಿದೆ, ಶಿಸ್ತುಬದ್ಧವಾಗಿ ಅನುಷ್ಠಾನ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀ ಕ್ಷೇತ್ರ ಗುರುಗಳ ಚಿಂತನೆ ಜನರು ನೆಮ್ಮದಿಯಿಂದ ಇರುವುದಾಗಿದೆ ಎಂದರು.
ಸಭೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅರಸೀಕೆರೆ ಯೋಜನಾಧಿಕಾರಿ ಅಕ್ಷತಾ ರೈ ಮತ್ತು ಬಾಣಾವರ ಯೋಜನಾಧಿಕಾರಿ ಸೋಮನಾಥ್, ಶುದ್ಧ ಕುಡಿಯುವ ನೀರು ಘಟಕದ ತಾಂತ್ರಿಕ ತಜ್ಞ ಲೋಕೇಶ್, ದಯಾನಂದ್ ಉಪಸ್ಥಿತರಿದ್ದರು.