
*ಹೊಯ್ಸಳ ವಿಜಯ ಅರಸೀಕೆರೆ*
ಅರಸೀಕೆರೆ : ನಗರದ ಹೊರ ವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಹಾಸನ ಜಿಲ್ಲಾ ವಿಜ್ಞಾನ ಕೇಂದ್ರ ಅರಸೀಕೆರೆ ಇವರ ಸಹಯೋಗದೊಂದಿಗೆ ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗೀತಾ. ಎ. ಅವರು ಗಿಡ ನೆಡುವ ಮೂಲಕ ಪರಿಸರ ದಿನದ ಆಚರಣೆಗೆ ಚಾಲನೆ ನೀಡಿ ಮಾತನಾಡಿ ಮಾನವ ಸ್ವಾರ್ಥದಿಂದ ಪರಿಸರದೊಂದಿಗೆ ಸಂಘರ್ಷಕ್ಕೆ ಇಳಿಯದೆ ಹೊಂದಾಣಿಕೆಯಿಂದ ಬದುಕಬೇಕು. ಪ್ಲಾಸ್ಟಿಕ್ ಮಾಲಿನ್ಯದಿಂದ ಮುಕ್ತವಾದ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ. ಪರಿಸರವೆಂದರೆ ಮರ ಗಿಡ ನೀರು ಮಣ್ಣು ಕಲ್ಲು ಪ್ರಾಣಿ ಪಕ್ಷಿ ವಾತಾವರಣ ಹಾಗೂ ಎಲ್ಲ ಜೀವ ಜಂತುಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳಲ್ಲಿ ಕೈಗಾರಿಕೋದ್ಯಮಿಗಳಲ್ಲಿ ಹಾಗೂ ಪ್ರತಿಯೊಬ್ಬ ನಾಗರೀಕರಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಪರಿಸರದಿನದ ಆಚರಣೆ ಪೂರಕವಾಗಿದೆ ಎಂದು ಅಭಿಪ್ರಾಯಸಿದರು. ಕರವೇ ಜಿಲ್ಲಾ ಉಪಾಧ್ಯಕ್ಷರಾದ ಹೇಮಂತ್ ಕುಮಾರ್ ಅವರು ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸುವಂತಹ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಅನ್ಯಗ್ರಹಗಳ ಮೇಲೆ ಕಾಲಿಟ್ಟಿರುವ ಮನುಷ್ಯ ಭೂಮಿಯ ಮೇಲಿರುವ ನೀರು ಗಾಳಿಯನ್ನು ಸ್ವಚ್ಛವಾಗಿರಿಸಿಕೊಳ್ಳಲು ಆಗದೆ ವಿಫಲನಾಗಿದ್ದಾನೆ ಇದು ದುರಂತವೇ ಸರಿ. ಪ್ರಕೃತಿಗೆ ವಿರುದ್ಧವಾದ ಯಾವುದೇ ಚಟುವಟಿಕೆಗಳನ್ನು ಮಾಡಬಾರದು ಎಂದು ಹೇಳಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ನಟರಾಜ್ ಕೆ. ಸಿ. ಅವರು ಉತ್ತಮ ಪರಿಸರದಿಂದ ಉತ್ತಮ ಆರೋಗ್ಯ ಸಾಧ್ಯ ಪರಿಸರ ದಿನದಂದು ಗಿಡನೆಡುವುದು ಅಷ್ಟೇ ಮುಖ್ಯವಲ್ಲ ಆ ಗಿಡಗಳನ್ನು ನೀರುಣಿಸಿ ಬೆಳೆಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಹೇಳಿದರು. ನಿವೃತ್ತ ಪ್ರಾಧ್ಯಾಪಕರು ಹಾಗೂ ಸಂಶೋಧಕರಾದ ಹನುಮಾ ನಾಯಕ್ ಅವರು ಹಿಂದೆ ಪ್ರತಿ ಹಳ್ಳಿಗಳಲ್ಲಿ ದೇವರ ಹೆಸರಿನಲ್ಲಿ ಮರ ಗಿಡ ಗೋಮಾಳ ತೋಪುಗಳು ಕೆರೆಗಳನ್ನು ನಿರ್ಮಿಸುವುದು ಮತ್ತು ನಿರ್ವಹಣೆ ಮಾಡುವುದು ಆ ಮೂಲಕ ಸಕಲ ಜೀವರಾಶಿಗಳ ಉಳಿವಿಗೆ ಪೋಷಣೆಗೆ ಪೂರಕವಾದ ವಾತಾವರಣ ನಿರ್ಮಿಸುವ ಕೆಲಸ ನಡೆಯುತ್ತಿತ್ತು ಅಂತಹ ಕೆರೆ ಕಟ್ಟೆ ತೋಪುಗಳನ್ನು ಸರ್ಕಾರಗಳು ಇಂದು ಕ್ರಮ ವಹಿಸಿ ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು. ಹಾಸನ ಜಿಲ್ಲಾ ವಿಜ್ಞಾನ ಕೇಂದ್ರದ ಸದಸ್ಯರಾದ ಯುವರಾಜ್ ಅವರು ಪರಿಸರದಲ್ಲಿ ಮಾನವ ಮಾತ್ರವಲ್ಲದೆ ಪ್ರತಿಯೊಂದು ಜೀವ ಜಂತುಗಳು ಉಳಿಯಬೇಕು ಅವುಗಳ ಉಳಿವು ನಮ್ಮ ಉಳಿವು ಅವುಗಳ ಅಳಿವು ನಮ್ಮ ಅಳಿವು ಎಂದು ಹೇಳಿದರು ಪರಿಸರವಾದಿ ಲಿಂಗರಾಜ್ ಎಲ್ ಐ ಸಿ ರವರು ಪರಿಸರಕ್ಕೆ ಪೂರಕವಾದ ಜೀವನಶೈಲಿಯನ್ನು ಅಳವಡಿಸಿಕೊಂಡಾಗ ಮಾತ್ರ ನಾವು ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ಹೇಳಿದರು. ಸಮಾಜಸೇವಕ ಕುಮಾರಣ್ಣ ಪರಿಸರ ಗೀತೆಯನ್ನು ಹಾಡಿದರು. ಕಾಲೇಜಿನ ಎನ್ಎಸ್ಎಸ್ ಅಧಿಕಾರಿಗಳಾದ ಡಾ. ರಾಜೇಶ್ ಖನ್ನಾ ಡಾ. ಹರೀಶ್ ಕುಮಾರ್ ರಾಘವೇಂದ್ರ ಭಜಂತ್ರಿ ಮೋಹನ್ ರಾಜ್ ಹಾಗೂ ಕೇಂದ್ರ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಮಂಜುನಾಥ್ ಸೈಪುಲ್ಲ ಹಳೆ ವಿದ್ಯಾರ್ಥಿಗಳ ಸಂಘದ ಉಪೇಂದ್ರ ಕಲಾವಿದರಾದ ಮಂಜುನಾಥ್ ಹರೀಶ್ ಕುಮಾರ್ ಎಲ್ ಸಂತೋಷ್ ಉಮಾಶಂಕರ ಸೇರಿದಂತೆ ಕಾಲೇಜಿನ ಎಲ್ಲಾ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಅರಳಿ, ಹಿಪ್ಪೆ, ಬೆಟ್ಟದನೆಲ್ಲಿ, ನೇರಳೆ, ಹಲಸು ಮುಂತಾದ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದರು.